ರಾಮನಾಥನ್ ಕೃಷ್ಣನ್
1937 -. ಭಾರತದ ಸುಪ್ರಸಿದ್ಧ ಟೆನಿಸ್ ಆಟಗಾರ. ಶಿರುನಲ್ವೇಲಿಯ ತೆನ್‍ಕೌಶಿ ಇವರ ಹುಟ್ಟೂರು. ಅರ್ಥಶಾಸ್ತ್ರದಲ್ಲಿ ಎಂ. ಎ. ಪದವಿಗಳಿಸಿದ್ದಾರೆ. ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಅತೀವ ಆಸಕ್ತಿ. ಎಳೆವಯಸ್ಸಿನಲ್ಲಿಯೇ ಇವರ ಮನಸ್ಸನ್ನು ಸೆಳೆದದ್ದು ಕ್ರಿಕೆಟ್ ಕ್ರೀಡೆ. ಆದರೆ ತಂದೆಯ ಒತ್ತಾಯ ಮತ್ತು ಜಯಚಾಮರಾಜೇಂದ್ರ ಒಡೆಯರ ಪ್ರೋತ್ಸಾಹ ಹಾಗೂ ಧನಸಹಾಯಗಳಿಂದ ಟೆನಿಸ್ ಅಭ್ಯಾಸಕ್ಕೆ ತೊಡಗಿದರು. ತಂದೆ ರಾಮನಾಥನ್ ಅವರೂ ಸ್ವತಃ ಉತ್ತಮ ಟೆನಿಸ್ ಆಟಗಾರರಾಗಿದ್ದರು.

ರಾಮನಾಥನ್ ಕೃಷ್ಣನ್ ತಮ್ಮ ಹದಿಮೂರನೆಯ ವಯಸ್ಸಿನಲ್ಲಿಯೇ ಟೆನಿಸ್‍ನಲ್ಲಿ ಅಸಾಮಾನ್ಯ ಚಾತುರ್ಯ ತೋರಿದರು. ಹದಿನೇಳನೆಯ ವಯಸ್ಸಿಗೆ ರಾಷ್ಟ್ರೀಯ ಚಾಂಪಿಯನ್ ಆದರು. ಮುಂದೆ ಎಂಟುಬಾರಿ ರಾಷ್ಟ್ರೀಯ ಚಾಂಪಿಯನ್‍ಶಿಪ್ಪನ್ನೂ ಆರುಬಾರಿ ಏಷ್ಯನ್ ಚಾಂಪಿಯನ್‍ಶಿಪ್ಪನ್ನೂ ಗೆದ್ದು ಅಂತಾರಾಷ್ಟ್ರೀಯ ಟೆನಿಸ್‍ನಲ್ಲಿ ಭಾರತಕ್ಕೆ ಒಂದು ಅತ್ಯುತ್ತಮ ಸ್ಥಾನ ದೊರಕಿಸಿಕೊಟ್ಟರು. ಇವರ ಆಟದ ಪ್ರತಿಭೆಯ ಬೆಳೆವಣಿಗೆಗಾಗಿ ಇವರ ಇಡೀ ಕುಟುಂಬ ಮದರಾಸಿಗೆ ಬಂದು ನೆಲೆಸಿತು. ಮದರಾಸಿನಲ್ಲಿದ್ದಾಗ ಲಾಯಲಾ ಕಾಲೇಜ್ ಏರ್ಪಡಿಸಿದ್ದ ಸ್ಟಾನ್‍ಲೀ ಕಪ್ ಟೂರ್ನಮೆಂಟನ್ನು ಗೆದ್ದ ರಾಮನಾಥನ್ ಕೃಷ್ಣನ್ ಅವರಿಗೆ ದೇಶದ ಎಲ್ಲ ಜೂನಿಯರ್ ಚಾಂಪಿಯನ್‍ಶಿಪ್‍ಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. 1953ರಲ್ಲಿ ಬೆಲ್ಜಿಯಮ್ ಮತ್ತು ಆಸ್ಟ್ರೇಲಿಯಗಳೊಂದಿಗೆ ಆಡಲು ಭಾರತದ ಡೇವಿಸ್ ಕಪ್ ತಂಡಕ್ಕೆ ಕೃಷ್ಣನ್ ಆಯ್ಕೆಯಾದದ್ದು ಟೆನಿಸ್ ಕ್ಷೇತ್ರದಲ್ಲಿ ಇವರು ಹೆಚ್ಚಿನ ಅನುಭವ ಪಡೆದುಕೊಳ್ಳಲು ಸಹಾಯಕವಾಯಿತು.

1954ರಲ್ಲಿ ವಿಂಬಲ್ಡನ್ ಜೂನಿಯರ್ ಚಾಂಪಿಯನ್ ಆಗಿ ಆಯ್ಕೆಗೊಂಡ ಕೃಷ್ಣನ್ ಈ ಗೌರವಕ್ಕೆ ಪಾತ್ರರಾದ ಪ್ರಥಮ ಭಾರತೀಯರು. ರಾಡ್‍ಲೇವರ್, ರಾಮ್ ಎಮರ್‍ಸನ್, ನೀಲ್‍ಫ್ರೇಜರ್ ಮೊದಲಾದ ವಿಶ್ವದ ಖ್ಯಾತ ಆಟಗಾರರೊಂದಿಗೆ ಸ್ಪರ್ಧಿಸಿರುವ ಖ್ಯಾತಿ ಇವರದು. ಇವರ ಆಟದಲ್ಲಿ ರಭಸದ ಹೊಡೆತಗಳಿಗಿಂತ ಗಡಿಬಿಡಿಯಲ್ಲದ, ನಿಧಾನಗತಿಯ ಆಟವೇ ಪ್ರಧಾನ. ಇದೇ ಇವರ ಆಟದ ವೈಶಿಷ್ಟ್ಯ. 1959ರಲ್ಲಿ ಏಷ್ಯನ್ ಪ್ರಶಸ್ತಿಗಳಿಸಿದರು. ಇವರಿಗೆ ಒಂಬತ್ತು ಬಾರಿ ಏಷ್ಯನ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ.

ರಾಮನಾಥನ್ ಕೃಷ್ಣನ್ ಅವರಿಗೆ ಅನೇಕ ಗೌರವಪ್ರಶಸ್ತಿಗಳು ದೊರತಿವೆ. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ, ಅರ್ಜುನ ಪ್ರಶಸ್ತಿ (1961), ಪದ್ಮಭೂಷಣ (1962) ನೀಡಿ ಗೌರವಿಸಿದೆ. ವರ್ಷದ ಅತ್ಯುತ್ತಮ ಆಟಗಾರನಿಗೆ ನೀಡುವ ಅಮೆರಿಕ ಸಂಯುಕ್ತ ಸಂಸ್ಥಾನದ ಹೆಲ್ಮ್ಸ್ ಪ್ರಶಸ್ತಿಯೂ ಇವರಿಗೆ ಲಭಿಸಿದೆ.

ಇವರ ಪತ್ನಿ ಲಲಿತ. ಮಗ ರಮೇಶ ಕೃಷ್ಣನ್ ಕೂಡ ತಂದೆಯಂತೆಯೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೆನಿಸ್ ರಂಗದಲ್ಲಿ ಅತ್ಯುತ್ತಮ ಆಟಗಾರರಾಗಿ ವಿಶೇಷ ಮನ್ನಣೆಗೆ ಪಾತ್ರರಾಗಿದ್ದಾರೆ.						   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ